ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ತಿಂಗಳು ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ಹೆಣ್ಣು ನೀರಾನೆ ಹಂಸಿಣಿ (12) ಅನಾರೋಗ್ಯದಿಂದ ಸಾವನ್ನಪ್ಪಿದೆ.
ಗರ್ಭಿಣಿಯಾಗಿದ್ದ ಹಂಸಿಣಿಗೆ ಮರಿ ಹಾಕುವ ಅವಧಿ ಮುಗಿದಿದ್ದರೂ ಪ್ರಸವವಾಗಿರಲಿಲ್ಲ. ಈ ಹಿನ್ನೆಲೆ ಏಪ್ರಿಲ್ 10ರಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ಮೈಸೂರು ವನ್ಯಜೀವಿ ಪಶುವೈದ್ಯರ ವಿಶೇಷ ತಂಡ ಆರೋಗ್ಯ ತಪಾಸಣೆ ನಡೆಸಿತ್ತು. ರಕ್ತ ಸೇರಿದಂತೆ ವಿವಿಧ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಪರೀಕ್ಷಾ ವರದಿಯಲ್ಲಿ ಹಂಸಿಣಿಯ ಗರ್ಭಾಶಯದಲ್ಲಿ ಗಂಭೀರ ಸೋಂಕು ಇರುವುದು ದೃಢಪಟ್ಟಿದ್ದು, ಗರ್ಭದಲ್ಲಿದ್ದ ಭ್ರೂಣ ಮೃತಪಟ್ಟಿರುವ ಸಾಧ್ಯತೆಯೂ ವ್ಯಕ್ತವಾಗಿತ್ತು. ಸೋಂಕು ತೀವ್ರಗೊಂಡ ಪರಿಣಾಮ ಪ್ರಮುಖ ಅಂಗಾಂಗಗಳ ಕಾರ್ಯ ಸ್ಥಗಿತಗೊಂಡಿದ್ದು, ಇಂದು ಮಧ್ಯಾಹ್ನ 3.30ರ ಸುಮಾರಿಗೆ ಹಂಸಿಣಿ ಕೊನೆಯುಸಿರೆಳೆದಿದೆ ಎಂದು ಹುಲಿ ಮತ್ತು ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಮರಾಕ್ಷರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನೀರಾನೆ ಕಳೆದ ಮಾರ್ಚ್ 19ರ ರಾತ್ರಿ 11.45ರ ವೇಳೆಗೆ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ಗರ್ಭಿಣಿ ನೀರಾನೆಯ ದೇಹದ ಉಷ್ಣಾಂಶವನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸುವ ವೇಳೆ ಸಂಭವಿಸಿದ ಈ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಅವರನ್ನು ತಕ್ಷಣ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 20ರ ಬೆಳಗ್ಗೆ ಅವರು ಮೃತಪಟ್ಟಿದ್ದರು.
ಇತ್ತೀಚೆಗಷ್ಟೇ ಗುತ್ತಿಗೆ ಆಧಾರದ ಮೇಲೆ ಪಶುವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ಸಮೀಕ್ಷಾ ರೆಡ್ಡಿ, ಪೋಷಕರಿಗೆ ಒಬ್ಬಳೇ ಮಗಳಾಗಿದ್ದರು ಎಂಬ ಸಂಗತಿ ದುರಂತವನ್ನು ಇನ್ನಷ್ಟು ಮನಕಲುಕುವಂತೆ ಮಾಡಿತ್ತು.
ಘಟನೆಗೆ ಸಂಬಂಧಿಸಿ ಮೃತ ವೈದ್ಯೆಯ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡುವಂತೆ ಹಾಗೂ ರಾಜ್ಯದ ಎಲ್ಲ ಮೃಗಾಲಯಗಳಲ್ಲಿ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಎಸ್‌ಒಪಿ ಕಡ್ಡಾಯವಾಗಿ ಪಾಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದರು. ಜೊತೆಗೆ ಹಿರಿಯ ಪಶುವೈದ್ಯರು ಮತ್ತು ಅರಣ್ಯಾಧಿಕಾರಿಗಳ ತಂಡದಿಂದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
