ಚಿತ್ರದುರ್ಗ: 21ನೇ ಶತಮಾನ ಅತ್ಯಂತ ವೇಗವಾಗಿ ಸಾಗುತ್ತಿರುವ ಬಿಕ್ಕಟ್ಟಿನ ಕಾಲಘಟ್ಟವಾಗಿದೆ. ಮೌಲ್ಯಗಳು ಇಂದು ಅಪಮೌಲ್ಯಗಳಾಗುತ್ತಿವೆ. ಸತ್ಯ ಮತ್ತು ಸುಳ್ಳುಗಳ ಗೊಂದಲದಲ್ಲಿರುವ ಈ ದುರಿತಕಾಲದಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಸಾಹಿತಿ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.
ನಗರದ ಬಾಪೂಜಿ ಸ್ಕೂಲ್ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘದಿಂದ ಆಯೋಜಿಸಿದ್ದ ಶಿವಸಂಚಾರ ನಾಟಕೋತ್ಸವದಲ್ಲಿ ಮಾತನಾಡಿದರು.
ವಿಶ್ವದ ಪ್ರಖರ ಮಾಧ್ಯಮ ರಂಗಭೂಮಿ. ಹೊಸ ರಂಗಪ್ರಯೋಗಗಳು ಯುವಕರನ್ನು ಆಕರ್ಷಿಸುತ್ತವೆ. ಸಾಧ್ಯವಾಗದ ಸಾಮಾಜಿಕ ಬದಲಾವಣೆಯನ್ನು ರಂಗಭೂಮಿಯಿಂದ ಮಾತ್ರ ಸಾಧಿಸಲು ಸಾಧ್ಯ. ಸಾಮಾಜಿಕ ಬದಲಾವಣೆಗೆ ರಂಗಭೂಮಿ ಪ್ರಮುಖ ಅಸ್ತ್ರ ಎಂದರು.
ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುವ ಶಕ್ತಿ ಹೊಂದಿದೆ.
ಕಳ್ಳ ಎಂಬ ಪದಕ್ಕೆ ಹಲವು ಅರ್ಥಗಳಿವೆ. ಹಣ, ಒಡವೆದೋಚುವ ದರೋಡೆ ಮಾತ್ರವಲ್ಲ ನಮ್ಮಲ್ಲಿ ಮಾತು, ಮೌಲ್ಯ, ನ್ಯಾಯ ಮತ್ತು ಸ್ನೇಹ ಹೀಗೆ ಹಲವು ಕಳ್ಳರಿದ್ದಾರೆ. ಸಮಾಜವು ಮಗುವನ್ನು ಛೀ ಕಳ್ಳ ಎಂದು ಲೇವಡಿ ಮಾಡುವುದೂ ಉಂಟು. ತಪ್ಪು ಮಾಡಿದಾಗ ಅದನ್ನು ಮುಚ್ಚಿಡಲು ಸುಳ್ಳಿನ ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದರು.
ಬಾಲ್ಯದಲ್ಲಿ ಬಿತ್ತಿದ ಕಳ್ಳತನದ ಪ್ರಜ್ಞೆ ಬೆಳೆಯುತ್ತಾ ಬದುಕಿನ ಇತರೆ ಮೌಲ್ಯಗಳ ಮೇಲೂ ಪ್ರಭಾವ ಬೀರುತ್ತದೆ. ಸತ್ಯಕ್ಕೆ ಹೇಳಿದ ಸಾಕ್ಷಿ ಸುಳ್ಳು ಹೇಳಿದರೆ ಬಾರದು. ರಂಗಭೂಮಿ ನೇರವಾಗಿ ಟೀಕಿಸುವುದಿಲ್ಲ ಬದಲಿಗೆ ವಿಡಂಬನೆ ಮತ್ತು ಹಾಸ್ಯದ ಮೂಲಕ ಸಮಾಜದ ಮುಖಕ್ಕೆ ಕನ್ನಡಿ ಹಿಡಿಯುತ್ತದೆ ಎಂದರು.
ಹಿರಿಯ ಸಾಹಿತಿ ಚಂದ್ರಶೇಖರ ತಾಳ್ಯ ಮಾತನಾಡಿ, ರಂಗಕಲೆಯು ಪ್ರಭುತ್ವದ ವಿರುದ್ಧ ದನಿಯೆತ್ತುವಂತಿರಬೇಕು. ಮತ್ತು ಯಾವುದೇ ಕಾರಣಕ್ಕೂ ಪ್ರಭುತ್ವಕ್ಕೆ ತಲೆಬಾಗಬಾರದು. ಲೋಕದ ಡೊಂಕು ತಿದ್ದಲು ರೂಪಕ ಮತ್ತು ನಾಟಕಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ರಂಗ ಮಾಧ್ಯಮ ಒಳನೋಟಗಳನ್ನು ಮತ್ತು ಸಂಸ್ಕೃತಿಯ ಬೇರುಗಳಾಗಿ ಬೆಳೆದು ಬಂದಿದೆ. ವಚನ ಸಾಹಿತ್ಯವು ನಾಟಕಗಳಿಗೆ ಮತ್ತಷ್ಟು ಪ್ರೇರಣೆಯಾಗಿವೆ. ಇಪ್ಪತ್ತು ವರ್ಷಗಳಿಂದ ಶಿವಸಂಚಾರವು ನಾಟಕಗಳ ಮೂಲಕ ಸಮಾಜಕ್ಕೆ ಮೌಲ್ಯಯುತ ಸಂದೇಶಗಳನ್ನು ನೀಡುತ್ತಾ ಬಂದಿದೆ ಎಂದರು.
ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ರಂಗಭೂಮಿ ಮಾನವ ಕುಲದ ಮೊದಲ ವಿಶ್ವವಿದ್ಯಾಲಯ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೆರೆಸುವ ಉತ್ಕೃಷ್ಠ ಮಾಧ್ಯಮ. ಪ್ರತಿಯೊಬ್ಬರಿಗೂ ಜೀವನದ ಪಾಠವನ್ನು ಕಲಿಸುವ ಶ್ರೇಷ್ಠತೆಯ ರಂಗಶಾಲೆ ಎಂದು ತಿಳಿಸಿದರು.
ನಾಟಕ ಎನ್ನುವುದು ಕೇವಲ ಮನೋರಂಜನೆಯ ಉದ್ದೇಶ ಮಾತ್ರವಲ್ಲ, ಸಮಾಜಮುಖಿಯಾಗಿ ಸಮಾಜವನ್ನು ಎಚ್ಚರಿಸುತ್ತದೆ. ರಂಗಭೂಮಿ ಸಾಮಾನ್ಯರನ್ನೂ ಮಹಾತ್ಮರನ್ನಾಗಿಸುತ್ತದೆ. ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುವ ಪ್ರತಿಯೊಂದೂ ನಾಟಕಗಳು ಜ್ಞಾನದ ಬೆಳಕನ್ನು ನೀಡುವ ಜೊತೆಗೆ ಅಂಧಕಾರವನ್ನು ತೊಡೆದುಹಾಕುತ್ತವೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸುಂದರ ಸಮಾಜವನ್ನು ಕಟ್ಟುವ ಶಕ್ತಿ ರಂಗಭೂಮಿಗಿದೆ ಎಂದರು.
ರಂಗಭೂಮಿಯು ಜನಮಾನಸದಲ್ಲಿ ನೆಲೆಯೂರಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹಾಗ್ರಂಥ ಮತ್ತು ದಿವೌಷಧ. ಮಾನಸಿಕ ಮತ್ತು ದೈಹಿಕವಾಗಿ ಸದೃಢತೆಯನ್ನು ಕಲ್ಪಿಸುತ್ತದೆ. ಅಮ್ಮನ ಕೈತುತ್ತಿನ ತಾಜಾ ಅಡುಗೆಗೆ ರಂಗಭೂಮಿ ಸಮಾನವಾಗಿದೆ ಎಂದು ತಿಳಿಸಿದರು.
ರಂಗಕರ್ಮಿ ಕೃಷ್ಣಮೂರ್ತಿ ಮೂಡಬಾಗಿಲು ಇವರ ರಚನೆ, ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕಳ್ಳರ ಸಂತೆ ನಾಟಕವನ್ನು ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಅಭಿನಯಿಸಿದರು.
ಬಾಪೂಜಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಪತ್ರಕರ್ತ ರವಿ ಮಲ್ಲಾಪುರ, ನಗರಸಭೆಯ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಸ್ಕೌಟ್ ಅಂಡ್ ಗೈಡ್ ಕಾರ್ಯದರ್ಶಿ ಅನಂತರೆಡ್ಡಿ, ಗ್ರಾ.ಪಂ ಸದಸ್ಯೆ ಜ್ಯೋತಿ ದೇವೇಂದ್ರಪ್ಪ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಇದ್ದರು.
