ಚಿತ್ರದುರ್ಗ.ಮೇ 4: ರಾಜ್ಯದಲ್ಲಿ ನುಡಿದಂತೆ ನಡೆಯುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದತ್ತ ಮತದಾರರ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಯಲ್ಲಿನ ಗೆಲುವೇ ಸಾಕ್ಷಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದ್ದಾರೆ.
ರಾಜ್ಯದ ಎರಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಸಿದ್ದರಾಮಯ್ಯ ಅವರ ಆಡಳಿತದ ಹಿರಿಮೆಗೆ ಬಹುದೊಡ್ಡ ಗರಿ ಆಗಿದೆ. ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ ಸಂದರ್ಭ ಇದು ಸಾಧ್ಯವೇ ಇಲ್ಲವೆಂದು ಸುದ್ದಿ ಹರಡಿದರು. ಬಳಿಕ ಅನುಷ್ಠಾನಕ್ಕೆ ತರುತ್ತಿದ್ದಂತೆ ರಾಜ್ಯ ದಿವಾಳಿ ಆಗಲಿದೆ ಎಂದು ಬೊಬ್ಬೆ ಹಾಕಿದರು. ಆದರೆ, ದೇಶದಲ್ಲಿಯೇ ಅತ್ಯಂತ ಶಿಸ್ತುಬದ್ಧ ಆರ್ಥಿಕ ಸ್ಥಿತಿಯಲ್ಲಿ ರಾಜ್ಯವೇ ನಂ. 1 ಆಗಿದೆ. ಇದಕ್ಕೆ ಮತದಾರರು ಈಗ ಮುದ್ರೆ ಒತ್ತಿದ್ದಾರೆ ಎಂದಿದ್ದಾರೆ.
ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎಲ್ಲ ರಾಜಕೀಯ ಶತ್ರುಗಳು ಒಗ್ಗೂಡಿದ್ದರು. ಪಕ್ಷದಿಂದ ಉಚ್ಛಾಟಿಸಿದ್ದ ಯತ್ನಾಳ್ ಅವರನ್ನು ಬಿಜೆಪಿ ಪ್ರಚಾರಕ್ಕೆ ಕರೆತಂದಿತು. ಜಾತಿಗಳ ಮಧ್ಯೆ ಕಂದಕ ಹುಟ್ಟುಹಾಕುವ ಕೆಲಸ ಮಾಡಿತು. ಆದರೆ, ಆ ಕ್ಷೇತ್ರದ ಮತದಾರರು ನಮ್ಮ ನಿರೀಕ್ಷೆಗೂ ಮೀರಿ ಕೈ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದರು.
ಅದೇ ರೀತಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷಕ್ಕೆ ನಿಷ್ಠವಾಗಿರುವ ಶಾಮನೂರು ಕುಟುಂಬದ ಕುಡಿ, ವಿದ್ಯಾವಂತ ಯುವಕ ಸಮರ್ಥನನ್ನು ಒಮ್ಮತದಿಂದ ಅಭ್ಯರ್ಥಿಯನ್ನಾಗಿಸಲಾಗಿತ್ತು. ಆದರೆ, ಸದಾ ಮುಸ್ಲಿಮರನ್ನು ಶತ್ರುಗಳಂತೆ ನೋಡುವ ಬಿಜೆಪಿ ನಾಯಕರು ಉರಿಯುವ ಮನೆಯಲ್ಲಿ ಗಳ ಹಿರಿಯುವ ರೀತಿ ಮುಸ್ಲಿಮರಿಗೆ ಟಿಕೆಟ್ ನೀಡದೆ ಕಾಂಗ್ರೆಸ್ ವಂಚಿಸಲಾಗಿದೆ ಎಂದು ದೂರಲು ಆರಂಭಿಸಿದರು.
ಒಂದೇಡೆ ಮುಸ್ಲಿಮರನ್ನು ಕೈ ಸರ್ಕಾರದ ತುಷ್ಠಿಕರಣ ಮಾಡಲಾಗುತ್ತಿದೆ ಎಂದು ದೂರುವ ಬಿಜೆಪಿಯವರೇ, ಮತ್ತೊಂದೆಡೆ ಮುಸ್ಲಿಮರನ್ನು ಕಾಂಗ್ರೆಸ್ ವಂಚಿಸುತ್ತಿದೆ, ಕೇವಲ ಮತಬ್ಯಾಂಕ್ ಮಾಡಿಕೊಂಡಿದೆ ಎಂದು ಆರೋಪಿಸಿ, ಕ್ಷೇತ್ರದಲ್ಲಿ ಸುಳ್ಳು ಸುದ್ದಿ ಹರಡಿಸಿದರು.
ಎಸ್‍ಡಿಎಫ್‍ಐ ಅಭ್ಯರ್ಥಿಗೆ ಬಿಜೆಪಿಗರು ಹಿಂಬಾಗಿಲಿನಿಂದ ಎಲ್ಲ ರೀತಿ ಸಹಕಾರ, ಬೆಂಬಲ ನೀಡುವ ಮೂಲಕ ಮತವಿಭಜನೆಗೆ ಪ್ರಯತ್ನ ನಡೆಸಿದರು. ಆದರೂ ಕಾಂಗ್ರೆಸ್ ಪಕ್ಷದ ಭದ್ರಕೋಟೆ ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರು ಅಂತಿಮವಾಗಿ ಪ್ರಜ್ಞಾವಂತಿಕೆ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 60 ಸಾವಿರ ಕೋಟಿ ರೂ. ಹಣ ಗ್ಯಾರೆಂಟಿ ಹೆಸರಲ್ಲಿ ನೇರ ಜನರ ಖಾತೆ ಸಿದ್ದರಾಮಯ್ಯ ಸರ್ಕಾರ ಜಮೆ ಮಾಡುತ್ತಿರುವುದು, ಜೊತೆಗೆ ಜಿಎಸ್‍ಟಿ ಸೇರಿ ವಿವಿಧ ರೀತಿ ರಾಜ್ಯಕ್ಕೆ ನ್ಯಾಯಯುತವಾಗಿ ದೊರಕಬೇಕಾದ ಅನುದಾನ ಕೇಂದ್ರ ಕೊಡದಿದ್ದರೂ ಎಲ್ಲಿಯೂ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗದ ರೀತಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದಿರುವುದು. ಒಳಮೀಸಲಾತಿ ವಿಷಯದಲ್ಲಿ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಅನುಷ್ಠಾನಗೊಳಿಸಿದ್ದು, ಹೀಗೆ ವಿವಿಧ ಕಾರಣಕ್ಕೆ ಸಿದ್ದರಾಮಯ್ಯ ಜನರ ಮನ ಗೆದ್ದಿದ್ದು, ಅದರ ಫಲ ರಾಜ್ಯದ ಎರಡು ಕ್ಷೇತ್ರದಲ್ಲಿನ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿದೆ.
ಉತ್ತಮ, ಜನಪರ, ಪ್ರಾಮಾಣಿಕ, ದಕ್ಷ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನಾಯಕತ್ವವನ್ನು ಮತದಾರರು ಮೆಚ್ಚಿಕೊಂಡಿದ್ದಾರೆ. ಪ್ರತಿಪಕ್ಷಗಳು ಎಷ್ಟೇ ಗಿಮಿಕ್ ನಡೆಸಿದರೂ ಮತದಾರ ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ಪರ ಒಲವು ತೋರಿರುವುದು ವಿಶೇಷ ಎಂದಿದ್ದಾರೆ.
ಚಿಕ್ಕ ವಯಸ್ಸಿನ ಸಮರ್ಥ ಶಾಮನೂರು ಭವಿಷ್ಯದಲ್ಲಿ ಬಹುದೊಡ್ಡ ನಾಯಕನಾಗಿ ಹೊರಹೊಮ್ಮುಲಿದ್ದು, ವಿದ್ಯಾವಂತರು, ಸಜ್ಜನಿಕೆ ಗುಣ ಹೊಂದಿರುವ ಯುವಪೀಳಿಗೆಗೆ ಕಾಂಗ್ರೆಸ್ ಪಕ್ಷ ರಾಜಕೀಯ ವೇದಿಕೆ ಕಲ್ಪಿಸುತ್ತದೆ ಎಂಬುದಕ್ಕೆ ಉತ್ತಮ ಸಾಕ್ಷಿ. ಅದೇ ರೀತಿ ಬಾಗಲಕೋಟೆಯಲ್ಲಿ ಮೇಟಿ ಪುತ್ರ ಭರ್ಜರಿ ಗೆಲುವು ಸಾಧಿಸಿದ್ದು, ಈ ನಿಟ್ಟಿನಲ್ಲಿ ಶ್ರಮಿಸಿದ ಕಾರ್ಯಕರ್ತರು, ಸಂಘಟನೆಗಳುಮ ಮುಖಂಡರುಗಳ ಶ್ರಮ ಸ್ಮರಣೀಯ ಎಂದಿದ್ದಾರೆ.
