ಚಿತ್ರದುರ್ಗ : ಭೋಧನೆಯಲ್ಲಿ ರಂಗಭೂಮಿಯ ಕೌಶಲ್ಯಗಳ ಮಹತ್ವದ ಅರಿವಿರಬೇಕು. ದಾರ್ಶನಿಕರ ಜೀವನ ಚರಿತ್ರೆಗಳ ಬದುಕಿನ ಮೌಲ್ಯಗಳು ಉತ್ತಮ ಶಿಕ್ಷಕನ ಸ್ವತ್ತಾಗಿರಬೇಕು.ಶಿಕ್ಷಕರಿಗೆ ಬೋಧನಾ ಪ್ರೇರಣೆ ನೀಡುವುದರಿಂದ ಶೈಕ್ಷಣಿಕ ಗುಣಮಟ್ಟದ ಉತ್ತಮ ಫಲಿತಾಂಶವನ್ನು ಕಾಣಬಹುದು ಎಂದು ಶಿಕ್ಷಣತಜ್ಞ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು.
ನಗರದ ಕೋಟೆರಸ್ತೆಯಲ್ಲಿರುವ ರಾಘವೇಂದ್ರ ಶಿಕ್ಷಣ ವಿದ್ಯಾಲಯದಲ್ಲಿ ಬುಧವಾರ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಣದಲ್ಲಿ ರಂಗಕಲೆ -2026 ತರಬೇತಿ ಕಾರ್ಯಾಗಾರ, ರಂಗಗೀತೆ, ಉಪನ್ಯಾಸ, ಕವಿಕಾವ್ಯ ಪರಿಚಯ ಮತ್ತು ನಾಟಕ ಪ್ರದರ್ಶನದಲ್ಲಿ ಶೈಕ್ಷಣಿಕ ರಂಗಕಲೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತವಾಗದೆ ಅಂತರಂಗ ಮತ್ತು ಬಹಿರಂಗದ ಸದೃಢವಾದ ಶಿಕ್ಷಣದ ಸೌಂದರ್ಯ ಪ್ರಜ್ಞೆಯನ್ನು ಸಂಪಾದಿಸಬೇಕು ಎಂದರು.
ಆಳವಾದ ಅಧ್ಯಯನ ಬೋಧನೆಗೆ ಅನುಕೂಲವಾಗುತ್ತದೆ. ಮಕ್ಕಳಿಗೆ ಮುದನೀಡುವ ಶಿಕ್ಷಕರ ವಾಕ್ಚಾತುರ್ಯ ಪರಿಣಾಮಕಾರಿ ಕಲಿಕೆಗೆ ಸಹಾಯಕವಾಗುತ್ತದೆ. ಶಿಕ್ಷಕರ ದೇಹದ ನಿಲುವು, ಸ್ಪಷ್ಟವಾದ ಮಾತಿನ ಏರಿಳಿತ, ಪಾಠೋಪಕರಣಗಳ ಬಳಕೆ ಮತ್ತು ಭಾವಾಭಿವ್ಯಕ್ತಿ ವ್ಯವಸ್ಥಿತವಾಗಿರಬೇಕು ಎಂದು ಹೇಳಿದರು.
ಭಾಷೆಯು ಸರಳ ಮತ್ತು ನೇರವಾಗಿದ್ದರೆ ಪಠ್ಯದ ವಿಷಯ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲಲು ರಂಗಕಲೆಯ ಚಟುವಟಿಕೆಗಳು ಅನುಕೂಲವಾಗಿದೆ. ಹೃದಯಸ್ಪರ್ಶಿಯಾದ ಬೋಧನೆಗೆ ನಿರರ್ಗಳ ಮತ್ತು ಶಾಶ್ವತ ಕಲಿಕೆಗೆ ರಂಗಭೂಮಿಯ ಚಟುವಟಿಕೆಗಳು ಸಹಕಾರಿಯಾಗಿವೆ. ಕಲಿಕೆಯಲ್ಲಿ ವ್ಯತ್ಯಯಗಳ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಿ ಬೆರಳೆಣಿಕೆಯಷ್ಟು ಕೆಪಿಎಸ್ ಶಾಲೆಗಳನ್ನು ತೆರೆಯುತ್ತಿರುವುದರಿಂದ ಎಲ್ಲರಿಗೂ ಶಿಕ್ಷಕ ಹುದ್ದೆಗಳು ಸಿಗುವುದಿಲ್ಲ. ಸಾವಿರಕ್ಕೂ ಹೆಚ್ಚು ಪದವೀಧರ ನಿರುದ್ಯೋಗಿಗಳು ಕೆಲಸಗಳಿಗಾಗಿ ಅಲೆದಾಡುತ್ತಿದ್ದಾರೆ. ಸರ್ಕಾರಿ ಹುದ್ದೆಗಳನ್ನು ಕಾಯದೆ ಬದುಕಿನಲ್ಲಿ ಆರ್ಥಿಕ ಮತ್ತು ವೈಯಕ್ತಿಕವಾಗಿ ಜೀವನ ನಡೆಸಲು ಶ್ರಮಿಸಬೇಕಿದೆ ಎಂದರು.
ಹೊಲ ಮನೆ ರೈತ ಕುಟುಂಬಗಳಲ್ಲಿ ಸಿಕ್ಕ ಉದ್ಯೋಗಗಳಲ್ಲಿ ಮನಃಸ್ಪೂರ್ತಿಯಾಗಿ ಕಾರ್ಯನಿರ್ವಹಿಸಿ ಕೌಟುಂಬಿಕ ಮತ್ತು ಆರ್ಥಿಕ ಬದುಕನ್ನು ನಿರ್ವಹಿಸಿಕೊಂಡು ಹೋಗಬೇಕು. ಪೋಷಕರನ್ನು ಮಕ್ಕಳು ಅನುಸರಿಸುತ್ತಾರೆ. ಮಾಧ್ಯಮ ಮತ್ತು ಜಾಲತಾಣಗಳನ್ನು ಅವಲೋಕಿಸುವಲ್ಲಿ ಸದಾ ಎಚ್ಚರಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಪಠ್ಯದೊಂದಿಗೆ ತಲ್ಲೀನವಾಗುವಂಥ ಆಟಪಾಠಗಳ ಬಗ್ಗೆ ಅರಿವನ್ನು ಮೂಡಿಸಬೇಕು ಎಂದು ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ರಂಗಭೂಮಿ ನಮ್ಮ ಕನ್ನಡನಾಡಿನ ಮೂಲಸಂಸ್ಕೃತಿ. ಧಾರ್ಮಿಕ ಮತ್ತು ಜೀವನದ ಸಂಪ್ರದಾಯಬದ್ಧ ಜೀವನಕ್ರಮ ಹಾಸುಹೊಕ್ಕಾಗಿದೆ. ಜನಪದ ಆಧಾರದಲ್ಲಿ ಆರೋಗ್ಯ, ಪರಿಸರ, ಶಿಕ್ಷಣ ಮತ್ತು ಸಾಂಸ್ಕೃತಿಕ ಗುಣಮಟ್ಟವನ್ನು ಗಮನಿಸಬೇಕು ಎಂದರು.
ಹಿರಿಯ ಪತ್ರಕರ್ತ ವೀರೇಂದ್ರಕುಮಾರ್ ಕೋಗುಂಡೆ ಮಠ ಇವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಡಾ.ಕೆ.ಮೋಹನ್ಕುಮಾರ್ ಇವರು ವಿದ್ಯಾವಾರಿಧಿ ತರಾಸು ರವರ ಜನ್ಮದಿನದ ಅಂಗವಾಗಿ ಪರಿಚಯ ಲೇಖನವನ್ನು ವಾಚನ ಮಾಡಿದರು.
ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಣದಲ್ಲಿ ರಂಗಕಲೆಯ ತರಬೇತಿ ಕಾರ್ಯಾಗಾರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ನಿರ್ದೇಶನದಲ್ಲಿ ಮೂಢನಂಬಿಕೆ, ಬಾಲ್ಯವಿವಾಹ, ದುಶ್ಚಟ, ವರದಕ್ಷಿಣೆ, ಭ್ರಷ್ಟಾಚಾರ ಮತ್ತು ಜಾತಿಪದ್ಧತಿ ನಿರ್ಮೂಲನೆ ಬಗ್ಗೆ ರಂಗ ತಾಲೀಮು ನಡೆಸಿದರು.
ಉಪನ್ಯಾಸಕರಾದ ಡಿ.ಸುದರ್ಶನ, ಜಿ.ಎಸ್.ರಾಘವೇಂದ್ರ, ಎಂ.ಸ್ವಾತಿ, ಎಸ್.ಟಿ.ಪದ್ಮಶ್ರೀ, ದೇ.ಶಿ.ನಿರ್ದೇಶಕ ರುದ್ರಮುನಿ, ಹಗಲುವೇಷ ಕಲಾವಿದ ಮಂಜುನಾಥ, ಗಾಯಕ ಕೆ.ಗಂಗಾಧರ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು. ಪ್ರಶಿಕ್ಷಣಾರ್ಥಿ ಗಫೂರ್ ಪ್ರಾರ್ಥಿಸಿದರು. ಎಂ.ಬಿ.ಮಂಜುನಾಥ ನಿರೂಪಿಸಿದರು.
